ರಾಣಿಪಾತ್ರದ ರಾಚಪ್ಪ ಎಂದೇ ಪ್ರಸಿದ್ದರಾಗಿದ್ದ ಕನ್ನಡ ರಂಗಭೂಮಿಯ ನಟ. ಬೆಂಗಳೂರಿನ ಸಿಟಿ ಅಪೆರಾ ಟ್ರೂಪ್ ಎಂಬ ನಾಟಕಸಂಸ್ಥೆಯ ನಟರಾಗಿದ್ದರು. ಈ ಕಂಪನಿ ಮೈಸೂರಿನಲ್ಲಿ ಪ್ರದರ್ಶಿಸಿದ ನಾಟಕಗಳು ಜನಪ್ರಿಯವಾದವು. ಆಗಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಅಪೇಕ್ಷೆಯಂತೆ ಅರಮನೆಯ ನಾಟಕ ಕಂಪನಿಯಲ್ಲಿಯೂ ಹಲವು ನಾಟಕಗಳನ್ನಾಡಿದರು. ಈ ನಾಟಕಗಳಲ್ಲಿ ಪಾತ್ರವಹಿಸಿದ ರಾಚಪ್ಪನವರ ಅಭಿನಯವನ್ನು ಮೆಚ್ಚಿಕೊಂಡ ಕೃಷ್ಣರಾಜ ಒಡೆಯರು, ಇವರನ್ನು ತಮ್ಮ ಅರಮನೆ ನಾಟಕ ಕಂಪನಿಗೆ ಸೇರಿಸಿಕೊಂಡು, ಬಿಡಾರು ಕೃಷ್ಣಪ್ಪನವರಿಂದ ಸಂಗೀತ ಪಾಠವನ್ನು ಮಾಡಿಸಿದರು. ಇದರಿಂದ ಉತ್ತೇಜನಗೊಂಡ ರಾಚಪ್ಪನವರು, ಹಲವು ಬಗೆಯ ರಾಣಿಪಾತ್ರಗಳನ್ನು ಅಭಿನಯಿಸಿ ಜನಪ್ರಿಯರಾದರಲ್ಲದೇ ತಮ್ಮ ಪಾತ್ರಗಳಿಗೆ ಸಂಬಂಧಿಸಿದ ಅನೇಕ ಹಾಡುಗಳನ್ನು ತಾವೇ ಹಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಅರಮನೆ ನಾಟಕ ಕಂಪನಿಯಲ್ಲಿದ್ದ ಸರ್ಟನ್ ರಾಮರಾವ್, ದೊಡ್ಡ ಮಹಾಲಿಂಗಪ್ಪ, ಲಕ್ಷ್ಮೀಪತಿಶಾಸ್ತ್ರೀ ಮುಂತಾದ ಹೆಸರಾಂತ ಕಲಾವಿದರಿಂದ ಪ್ರಭಾವಗೊಂಡ ರಾಚಪ್ಪನವರು ಶಾಕುಂತಲ, ವಿರಾಟಪರ್ವ, ರಾಜಸೂಯಯಾಗ ಮುಂತಾದ ಪೌರಾಣಿಕ ನಾಟಕಗಳಲ್ಲಿ ರಾಜನ ಪಾತ್ರವಹಿಸಿ ತಮ್ಮ ಕಲಾ ನೈಪುಣ್ಯವನ್ನು ಪ್ರದರ್ಶಿಸಿದರು. ಇವರ ಅಭಿನಯಕಲೆಗೆ ಮಾರುಹೋಗಿದ್ದ ಕೃಷ್ಣರಾಜ ಒಡೆಯರು ಇವರಿಗೆ ಖಿಲ್ಲತ್ತುಗಳನ್ನೂ ಸುವರ್ಣಪದಕಗಳನ್ನೂ ನೀಡಿ ಗೌರವಿಸಿದರು. ರಾಚಪ್ಪನವರು ಅರಮನೆ ಕಂಪನಿಯಲ್ಲದೇ, ಶಾಕುಂತಲ ನಾಟಕ ಮಂಡಲಿ, ಶ್ರೀಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ ಮುಂತಾದ ನಾಟಕಕಂಪನಿಗಳಲ್ಲೂ ನಟರಾಗಿದ್ದರು. ಈ ಕಂಪನಿಗಳು ಮದರಾಸು ಮತ್ತು ಆಂಧ್ರಪ್ರದೇಶಗಳಲ್ಲಿ ಪ್ರದರ್ಶಿಸಿದ ನಾಟಕಗಳಲ್ಲೂ ಅಭಿನಯಿಸಿ, ಹೊರನಾಡಿನಲ್ಲೂ ಹೆಸರುಗೊಂಡರು. ಒಳ್ಳೆಯ ಕಂಠಶ್ರೀಯನ್ನು ಹೊಂದಿದ್ದ ರಾಚಪ್ಪನವರು ಹಾಡಿರುವ ಎಲ್ಲಿರುವೆ ತಂದೆ ಬಾರೋ, ಜಯ ಜಯ ಗೋಕುಲ ಬಾಲ, ನಾಗವೇಣಿ ನಗರಿಗೆ ನಾಂ ಪೋಗಿ ಬರುವೆನೆ ಮುಂತಾದ ಹಾಡುಗಳು ರಿಕಾರ್ಡುಗಳಾಗಿಯೂ ಜನಪ್ರಿಯವಾಗಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ